ಮಂಗಳವಾರ, ಮೇ 18, 2021

ಶಾಸನ ಮತ್ತು ಛಂದಸ್ಸು : ಡಾ.ಸಿ.ನಾಗಭೂಷಣ

 

ಶಾಸನ ಮತ್ತು ಛಂದಸ್ಸು :  ಡಾ.ಸಿ.ನಾಗಭೂಷಣ

ಶಾಸನಗಳನ್ನು ಛಂದಸ್ಸಿನ ಅಧ್ಯಯನದ ವಿಷಯವಾಗಿ ನಾವು  ಅಧ್ಯಯನ ಮಾಡಬಹುದಾಗಿದೆ.ಚಂಪೂವಿನ ಛಂದೋವೈವಿಧ್ಯತೆಯನ್ನು, ಆರಂಭಕಾಲದ ಚಂಪೂ ಛಂದೋ ವೈವಿಧ್ಯತೆಯ ಸ್ವರೂಪವನ್ನು ತಿಳಿಯುವಲ್ಲಿ ಶಾಸನಗಳ ನೆರವು ಅತ್ಯಗತ್ಯವಾಗಿದೆ. ಸಂಸ್ಕೃತದಿಂದ ಕನ್ನಡಕ್ಕೆ ಹೊಸದಾಗಿ ಅಕ್ಷರ ವೃತ್ತಗಳನ್ನು ಸ್ವೀಕರಿಸಿದಾಗ ಇದ್ದ ಪರಿಸ್ಥಿತಿಯ ಪರಿಚಯಕ್ಕೆ ನಾವು 7ನೇ ಶತಮಾನದ ಆದಿಭಾಗಕ್ಕೆ ಹೋಗಬೇಕಾಗುತ್ತದೆ. ಕ್ರಿ.ಶ. 500ರ ತಮಟಕಲ್ಲಿನ ಬಿಡಿಮುಕ್ತಕವು ಪಿಂಗಲನ ಅವಿಥವೆಂದು ಕರೆಯುವ, ಇತರರು ನರ್ಕುಟಕ ಅಥವಾ ನರ್ದಟಕ ಎಂಬುದಾಗಿ ಕರೆದಿರುವ ಒಂದು ವರ್ಣಸಮವೃತ್ತದಲ್ಲಿ ರಚಿತವಾಗಿದೆ.  ಕನ್ನಡದಲ್ಲಿ ಪ್ರಥಮ ವರ್ಣದ ಬಳಕೆ ಕ್ರಿ.ಶ.ಸುಮಾರು 5 ನೇಶತಮಾನದ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲು ಶಾಸನದಲ್ಲಿ ಕಂಡುಬರುತ್ತದೆ.

 ಬಿಣಮಣಿ ಅನ್ತ ಭೋಗಿ ಬಿಣದುಳ್ಮಣಿ ಚಿಲ್ಮನ ದೋಳ್

 ರಣಮುಖದುಳ್ಳ ಕೋಲಂ ನೆರಿಯರ್ಕುಮನಿನ್ದ್ಯಗುಣನ್

 ಪ್ರಣಯಿ ಜನಕ್ಕೆ ಕಾಮನಸತೋತ್ಪಲ ವರ್ಣನವನ್

 ಗುಣಮಧುರಾಂಕ್ಕ ದಿವ್ಯಪುರುಷನ್ ಪುರುಷ ಪ್ರವರನ್   ಈ ಶಾಸನದಲ್ಲಿ ಬಳಕೆಯಾಗಿರುವ  ಅಕ್ಷರ ವೃತ್ತವು 17 ನೆಯ ಅತ್ಯಷ್ಟಿಯಲ್ಲಿದ್ದು ಕನಕಾಬ್ಜಿನಿ ಅಥವಾ ನರ್ಕುಟಕವಾಗಿದೆ. ಈ ಆರಂಭ ಕಾಲೀನ ಶಾಸನಪದ್ಯವು ನಿರ್ದಿಷ್ಟ ಸ್ಥಾನದಲ್ಲಿ ಯತಿಯ ಪಾಲನೆ, ಆದಿ ಪ್ರಾಸ, ಅಂತ್ಯ ಪ್ರಾಸ ಪಾದಾಶಂತದಲ್ಲಿ ಪದಪದ ನಿಲುಗಡೆ ಗಳನ್ನು  ಒಳಗೊಂಡಿದ್ದು ಈ ವೃತ್ತವು ನಂತರ ಕಾಲದ ಚಂಪೂಕವಿಗಳಾದ ನಾಗವರ್ಮ, ನೇಮಿಚಂದ್ರ ಮುಂತಾದವರ ಕಾವ್ಯಗಳಲ್ಲಿ  ಕಾಣಿಸಿಕೊಂಡಿದೆ.

     ಕ್ರಿ.ಶ. 7ನೆಯ ಶತಮಾನದ ಶ್ರವಣಬೆಳುಗೊಳದ ಬಿಡಿಮುಕ್ತಕಗಳಲ್ಲಿ ಸುಮಾರು ಮೂವತ್ತರಷ್ಟು ಪದ್ಯಶಾಸನಗಳಿವೆ. ಈ ಶಾಸನ ಪದ್ಯಗಳ ವರ್ಣಛಂದಸ್ಸಾಗಿದೆ. ಈ ಬಿಡಿ ಮುಕ್ತಕಗಳಲ್ಲಿ ವೈವಿಧ್ಯಮಯವಾದ ಅಕ್ಷರ ಛಂದಸ್ಸಿನ12 ಪದ್ಯಗಳನ್ನು ಗುರುತಿಸ ಬಹುದಾಗಿದೆ. ಶಾರ್ದೂಲ ವಿಕ್ರೀಡಿತ 4 (ಶಾಸನ ಸಂಖ್ಯೆ, 13,22,27,116) ಮತ್ತೇಭ ವಿಕ್ರೀಡಿತ ( ಶಾಸನ ಸಂಖ್ಯೆ:76,77,97,98) ಮಲ್ಲಿಕಾಮಾಲೆ1 ( ಶಾಸನ ಸಂಖ್ಯೆ 31) ವಂಶಸ್ಥ 1 ( ಶಾಸನ ಸಂಖ್ಯೆ:114) ಇತ್ಯಾದಿ. ಶ್ರವಣ ಬೆಳಗೊಳದ ವೈವಿಧ್ಯಮಯ ಬಿಡಿ ಮುಕ್ತಕಗಳಲ್ಲಿಯ ವರ್ಣವೃತ್ತಗಳು ಸಂಸ್ಕೃತ ಛಂದಸ್ಸನ್ನು ವಿಫುಲವಾಗಿ ಬಳಸಿಕೊಂಡಿದ್ದಕ್ಕೆ ನಿದರ್ಶನವಾಗಿದೆ. ಕವಿರಾಜಮಾರ್ಗದ ಪೂರ್ವದಲ್ಲಿಯೇ ತಮಟಕಲ್ಲು, ಶ್ರವಣ ಬೆಳಗೊಳ ಮಾತ್ರವಲ್ಲದೆ ಮಂಗಳೂರು, ಉದಯಾವರ, ಬೆಲವತ್ತೆ, ಪಟ್ಟದಕಲ್ಲು,ನರಸಿಂಹರಾಜಪುರದ ಶಾಸನಗಳಲ್ಲಿಯೂ ಅಕ್ಷರವೃತ್ತಗಳು ಬಳಕೆಯಾಗಿವೆ. ಈ ವೃತ್ತಗಳು ಖ್ಯಾತಕರ್ನಾಟಕಗಳೂ, ವಂಶಸ್ಥ, ವಸಂತ ತಿಲಕ, ಮಂಗಲಮಂಗನಾ, ಮಲ್ಲಿಕಾಮಾಲೆ ಇತ್ಯಾದಿ ವಿರಳ ಪ್ರಯೋಗಗಳನ್ನು ಒಳಗೊಂಡಿವೆ.ಈ ಪಂಪಪೂರ್ವಯುಗದಲ್ಲಿಯೇ ಶಾಸನಗಳಲ್ಲಿ ಬಳಕೆಯಾಗಿರುವ ಈ ವರ್ಣವೃತ್ತಗಳು ಛಂದಸ್ಸಿನ ದೃಷ್ಟಿಯಿಂದ ಕೆಲವೆಡೆ ಶೈಥಿಲ್ಯಗಳನ್ನು ವೈಚಿತ್ರಗಳನ್ನು ಹೊಂದಿದ್ದರೂ ನಂತರದ ಪಂಪಾದಿ ಚಂಪೂಕವಿಗಳ ವೃತ್ತಗಳ ರಚನೆಗಳೊಡನೆ ಹೋಲಿಸಿ ನೋಡಿದಾಗ ಇವುಗಳು ಒಂದು ಬಗೆಯ ಪೂರ್ವಕಾಲದ ಸ್ಥಿತ್ಯಂತರಗಳನ್ನೂ ಪ್ರಾಯೋಗಿಕ ಪ್ರಯತ್ನಗಳನ್ನು ತೋರಿಸುವಂತಿವೆ. ಜೊತೆಗೆ ಶಾಸನಗಳಲ್ಲಿ ಬಳಕೆಯಗಿರುವ ಖ್ಯಾತಕರ್ನಾಟಕ ವೃತ್ತಗಳೂ ಇತರ ವರ್ಣವೃತ್ತಗಳೂ ಸಂಸ್ಕೃತ ಭಾಷಾ ಸಾಹಿತ್ಯಗಳ ವರ್ಚಸ್ಸು ಕನ್ನಡದ ಮೇಲೆ ಎಷ್ಟರ ಮಟ್ಟಿಗೆ ಆಗಿವೆ ಎಂಬುದನ್ನು ತೋರಿಸಲು ಸಹಾಯಕವಾಗಿವೆ. ಕನ್ನಡದ ಬಹುತೇಕ ಶಾಸನಗಳು ಚಂಪೂವಿನ ಚೌಕಟ್ಟನ್ನು, ಛಂದೋವೈವಿಧ್ಯತೆಯನ್ನು ಎಲ್ಲಾ ಕಾಲಕ್ಕೂ ಅಳವಡಿಸಿಕೊಂಡಿದ್ದು, ವರ್ಣವೃತ್ತಗಳಲ್ಲಿಯ ಸಮ, ಅರ್ಧಸಮ, ವಿಷಮ ವೃತ್ತಗಳಲ್ಲಿ ವೈವಿಧ್ಯಮಯತೆಯನ್ನು ಗುರುತಿಸಬಹುದಾಗಿದೆ.

  ಮಾತ್ರಾವೃತ್ತಗಳಲ್ಲಿ ಒಂದಾದ ಕಂದದ ಬಳಕೆಯು ಕವಿರಾಜ ಮಾರ್ಗ ಹಾಗೂ ನಂತರದ ಕಾವ್ಯಗಳಲ್ಲಿ ಯಥೇಚ್ಛವಾಗಿ ಬಳಕೆಯಾಗಿದ್ದರೂ ಕವಿರಾಜಮಾರ್ಗದ ಪೂರ್ವದಲ್ಲಿಯೇ ಕಂದದ ಬಳಕೆ ಶಾಸನಗಳಲ್ಲಿ ಬಳಕೆಗೊಂಡಿರುವುದನ್ನು ಕಾಣಬಹುದು. ಅತ್ಯಂತ ಪ್ರಾಚೀನತಮ ಕಂದಗಳು ನರಸಿಂಹರಾಜಪುರದ ಸಿಂಗಣ ಗದ್ದೆ ಜೈನಮಠದಲ್ಲಿ ದೊರೆತ ಗಂಗದೊರೆ ಶ್ರೀ ಪುರುಷನ ಕಾಲದ( ಕ್ರ.ಶ.726-788)`ನಿರ್ಮಲ ಕೋಶಿಕ  ವಂಶನ್..’ ಮತ್ತು` ಮುಖಮಾಗೆ ತೊಳ್ಳರೊಡೆಯರ್’ ಎಂದು ಪ್ರಾರಂಭವಾಗುವ ಎರಡು ಕಂದಗಳು ಹಾಗೂ ಕ್ರಿ.ಶ.797 ರ ಸೊರಬ ಶಾಸನದಲ್ಲಿ ಕಂಡು ಬರುವ ಕಂದಗಳು ಕನ್ನಡದ ಅತ್ಯಂತ ಪ್ರಾಚೀನತಮ ಕಂದಗಳಾಗಿವೆ. ಈ ಶಾಸನ ಪದ್ಯಗಳ ಕಂದದ ಶಿಲ್ಪ ಹಳತನದ ಲಕ್ಷಣಗಳಿಂದ ಕೂಡಿವೆ. ಕೊಪ್ಪಳ ತಾಲೋಕಿನ 11ನೆ ಶತಮಾನಕ್ಕೆ ಸೇರಿದ ಜೈನ ಶಾಸನವೊಂದರಲ್ಲಿ ಲಲಿತ ರಗಳೆಯ ಪ್ರಯೋಗ ಬಳಕೆಯಾಗಿದೆ. ಶಾಸನ ಪದ್ಯದ ಪ್ರಾರಂಭದಲ್ಲಿಯೇ ಲಲಿತ ರಗಳೆ ಎಂದು ಉಲ್ಲೇಖಿಸಿ ನಂತರ ಪದ್ಯದ ಸಾಲುಗಳು ಪ್ರಾರಂಭವಾಗಿವೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತಾಲೋಕಿನ ಕೋಗಳಿ ಗ್ರಾಮದ ಜೈನ ಬಸದಿಯ ಮುಂದಿರುವ ಕ್ರಿ.ಶ.1055 ರ ಶಾಸನವು 42 ಸಾಲುಗಳ ರಗಳೆ ಛಂದಸ್ಸಿನಲ್ಲಿ ರಚಿತವಾಗಿದೆ.

 ಶ್ರೀಮದರುಹಚ್ಚರಣ ಸರಸಿರುಹಭೃಂಗನಂ

 ಭೂಮಿ ಕೀರ್ತಿಸೆ ನೆಗಳ್ದ ಗುಣಗಣೋತ್ತುಂಗನಂ  ಎಂದು ಪ್ರಾರಂಭವಾಗಿ

  ಕೇವಳಮೆ ನೆಗಳ್ದಿಂದ್ರ ಕೀರ್ತಿನೃಪಪೂಜಿತಂ

  ಕೇವಳಮೆ ಸಕಳ ಗುಣಗಣ ಯಶೋರಾಜಿತಂ

ಎಂದು ಮುಕ್ತಾಯಗೊಳ್ಳಲಿರುವ ಈ ಶಾಸನದಲ್ಲಿ ಉಕ್ತವಾದ ತೋಮರ ರಗಳೆ ಎಂಬ ಹೆಸರು ಅಪೂರ್ವವಾದುದಾಗಿದೆ. ಈ ಹೆಸರು ಯಾವ ಛಂದೋ ಲಾಕ್ಷಣಿಕರ ಛಂದೋಗ್ರಂಥಗಳಲ್ಲಿಯೂ ಉಕ್ತವಾಗಿಲ್ಲ. ಈ ಶಾಸನದಲ್ಲಿ ಉಕ್ತವಾದತೋಮರ ರಗಳೆ ಎಂಬ ಹೆಸರು ಅಪರಿಚಿತವಾಗಿದ್ದರೂ ರಗಳೆಯ ಲಕ್ಷಣ ಮಾತ್ರ ಪರಿಚಿತವಾದುದೇ. 5.5 ಮಾತ್ರೆಯ ನಾಲ್ಕುಗಣಗಳಿಂದ ಕೂಡಿ 20 ಮಾತ್ರೆಗಳು ಆಗಿರುವುದು. ನಂತರದ ಕಾಲದಲ್ಲಿ ಹರಿಹರ ಕವಿಯು ಪ್ರಯೋಗಿಸಿದ ಲಲಿತ ರಗಳೆಯ ಲಕ್ಷಣವನ್ನು ಇದು ಹೋಲುತ್ತದೆ. ಈ ರಗಳೆಯ ಬಳಕೆಯ ಕಾಲ ಹರಿಹರನಿಗಿಂತಲೂ ಪೂರ್ವದಲ್ಲಿ ಎಂದರೆ ಸುಮಾರು ಎರಡು ಶತಮಾನಗಳ ಪೂರ್ವದಲ್ಲಿಯೇ ಬಳಕೆಯಾಗುತ್ತಿತ್ತು ಎಂಬುದು ವ್ಯಕ್ತವಾಗುತ್ತದೆ.

     ಅಂಶವೃತ್ತಗಳು ಕನ್ನಡ ಛಂದಸ್ಸಿನ ಮಹತ್ವದ ಛಂದೋಪ್ರಕಾರಗಳು. ‘ಪಂಪಪೂರ್ವಯುಗದಲ್ಲಿ ಗ್ರಂಥಸ್ಥವಾಗಿರಬಹುದಾದ ಈ ವೃತ್ತಗಳಲ್ಲಿ ಕೆಲವು ಪಂಪ, ಪೊನ್ನರ ಕಾವ್ಯಗಳಲ್ಲಿ ಕ್ವಚಿತ್ ಮಿಂಚಿ, ಶರಣರ ಮೂಲಕ ಮತ್ತೆ ಕಾವ್ಯಕ್ಕೆ ಮಾಧ್ಯಮವಾಗತೊಡಗಿದವು.’ ಅಂಶ ಛಂದೋಪ್ರಕಾರಗಳಾದ ತ್ರಿಪದಿ, ಪಿರಿಯಕ್ಕರ, ಷಟ್ಪದಿ ಮುಂತಾದವುಗಳು ಕನ್ನಡ ಕಾವ್ಯಗಳಿಗಿಂತ ಮೊದಲೇ ಶಾಸನಗಳಲ್ಲಿ ಬಳಕೆಗೊಂಡಿವೆ.  ಕನ್ನಡ ಕಾವ್ಯಗಳಿಗಿಂತ ಪೂರ್ವದಲ್ಲಿಯೇ ದೇಶೀಯ ಛಂದೋರೂಪವಾದ ತ್ರಿಪದಿ ರೂಪದ ಬಳಕೆ ದೊರೆಯುತ್ತದೆ. ಕವಿರಾಜಮಾರ್ಗದ ಪೂರ್ವದಲ್ಲಿಯೇ ಕ್ರಿ.ಶ. 700 ರ ಬಾದಾಮಿ ಶಾಸನ,ಹುಂಚದ ಶಾಸನ (ಕ್ರಿ.ಶ.800) ಹಾಗೂ ಸೊರಬದಶಾಸನ (ಕ್ರಿ.ಶ.800), ಹೇಮಾವತಿ ಗ್ರಾಮದ ಶಾಸನ ( ಕ್ರ.ಶ.980), ಗದಗ ಜಿಲ್ಲೆಯ ಸವಡಿ ಗ್ರಾಮದ ಶಾಸನ (ಕ್ರ.ಶ.971) ಹೂಲಿಯ ಶಾಸನ (ಕ್ರ.ಶ.980)  ಶಾಸನಗಳಲ್ಲಿ ತ್ರಿಪದಿ ರೂಪದ ಪದ್ಯಗಳು ದೊರೆಯುತ್ತವೆ. ಬಾದಾಮಿಯ ತಟ್ಟುಕೋಟೆ ಶಾಸನದ ಕಪ್ಪೆ ಅರಭಟನ ಗುಣಸ್ತವನವಿರುವ ಮೂರು ತ್ರಿಪದಿಗಳು ಈಗಾಗಲೇ ವಿದ್ವಾಂಸರಿಂದ ನಾನಾ ರೀತಿಯಲ್ಲಿ ಚರ್ಚೆಗೊಳಗಾಗಿವೆ. ದೇಶೀಯ ಛಂದಸ್ಸಿನ ದೃಷ್ಟಿಯಿಂದ ಈ ಪದ್ಯಗಳು ಲಕ್ಷಣಶುದ್ಧವಾಗಿ, ಗಣಗಳ ಸಂಖ್ಯೆ ಮತ್ತು ವಿನ್ಯಾಸ, 6 ಮತ್ತು10ರ ಸ್ಥಾನಗಳ ಯತಿನಿಯಮ, ರೂಢಿಗತವಾದ ಹಾಡಿಕೆಯ ಪರಿಪಾಠಿಗೆ  ಅನುಗುಣವಾಗಿ ಏರ್ಪಡುವ ನಿಲುಗಡೆಗಳು, ಪ್ರಾಸ ಒಳಪ್ರಾಸಗಳು ಇತಾದಿಗಳನ್ನು ಒಳಗೊಂಡಿದ್ದು ಶುದ್ಧ ಲಕ್ಷಣಾನ್ವಿತವಾಗಿವೆ. ವ್ಯಕ್ತಿಗಳ ತ್ಯಾಗ ಮತ್ತು ವೀರಗುಣಗಳನ್ನು ಕೀರ್ತಿಸಲು ದೇಶೀ ಛಂದೋಪ್ರಕಾರಗಳನ್ನು ಬಳಸುವ ಪರಿಪಾಠ ಪಂಪಪೂರ್ವಯುಗದಲ್ಲಿಯೇ ಇದ್ದಿತೆಂದು ಶಾಸನಗಳಿಂದ ತಿಳಿದು ಬರುತ್ತದೆ

    9 ನೇ ಶತಮಾನಕ್ಕಿಂತ ಹಿಂದಿನದ್ದೆಂದು ಹೇಳಲಾದ ಬಾದಾಮಿ ಶಾಸನದಲ್ಲಿಯ ಪುಟ್ಟಿ ಮಣಿನಾಗಕಂ’ ಎಂದು ಆರಂಭವಾಗುವ ಶಾಸನ ಹಾಗೂ ರಾಷ್ಟ್ರಕೂಟ ದೊರೆ 4 ನೆಯ ಇಂದ್ರನ ಕ್ರಿ.ಶ.982  ಶ್ರವಣ ಬೆಳಗೊಳದ ಶಾಸನ ಸಂಖ್ಯೆ 163 ರಲ್ಲಿ ಸಾಲು 99 ರಿಂದ 106 ರ ನಡುವೆ 2 ಪಿರಿಯಕ್ಕರ, ಸಾಲು 110 ರಿಂದ 116 ರವರೆಗೆ 1 ಪಿರಿಯಕ್ಕರ ಹೀಗೆ ಒಟ್ಟು 6 ಅಕ್ಕರಗಳು ಒಂದೇ ಶಾಸನದಲ್ಲಿ ಕಂಡು ಬಂದಿರುವುದು ಮಹತ್ತರ ಸಂಗತಿಯಾಗಿದೆ. ಇಲ್ಲಿಯವರೆವಿಗೂ ಅಂಶ ಛಂದಸ್ಸಿನ 36 ಪಿರಿಯಕ್ಕರದ ಪದ್ಯಗಳು ಶಾಸನಗಳಲ್ಲಿ ಕಂಡು ಬಂದಿವೆ.  ಮಾತ್ರಾ ಲಯದ ಷಟ್ಪದಿಗಿಂತ ಅಂಶಲಯದ ಷಟ್ಪದ ಮೊದಲೇ ರೂಢಿಯಲ್ಲಿದ್ದಿತು ಎಂಬುದು ಅಮ್ಮಿನಭಾವಿ ಶಾಸನ, ಚಿತ್ರದುರ್ಗ ಶಾಸನ, ಚಡಚಣ ಶಾಸನ, ಹಾನಗಲ್ ತಾಲೋಕಿನ ಆಡೂರಿನ ಕನ್ಯಾನ ಚಾಲುಕ್ಯ ಇಮ್ಮಡಿ ಜಯಸಿಂಹನ ಶಾಸನ, ಮೆಹಬೂಬ ನಗರ ಜಿಲ್ಲೆಯ ಗಂಗಾಪುರದಲ್ಲಿ ದೊರೆತ ಕನ್ನಡ ಶಾಸನ ಗಳಲ್ಲಿ ಬಳಕೆಯಾಗಿರುವ  ಅಂಶಷಟ್ಪದದ ಲಕ್ಷಣಗಳನ್ನು ಆಧರಿಸಿ ಹೇಳಬಹುದಾಗಿದೆ.

 ಸೊಲ್ಲಾಪುರದಲ್ಲಿ ದೊರೆತ ಕ್ರಿ.ಶ. 1200 ಶಾಸನದಲ್ಲಿ ವಿವಾಹ ಪುರಾಣ ಎನ್ನುವ ಕಾವ್ಯವೊಂದು ಕಂಡು ಬರುತ್ತಿದ್ದು ಆ ಕಾವ್ಯದಲ್ಲಿ ಗದ್ಯದ ಜೊತೆಗೆ ಅಂಶಷಟ್ಪದದ ಪದ್ಯಗಳು ಬಳಕೆಯಾಗಿವೆ.  ಅದೇ ರೀತಿ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ದೊರೆತ ತಾಮ್ರ ಶಾಸನದಲ್ಲಿ ಗದ್ಯದ ಜೊತೆಗೆ ಅಂಶಷಟ್ಪದಿ ಪದ್ಯಗಳು ಬಳಕೆಯಾಗಿವೆ. ಶಿವಪಾರ್ವತಿಯರ ವಿವಾಹವನ್ನು ವರ್ಣಿಸುವ ಈ ಶಾಸನದಲ್ಲಿ ಅಮೃತಮಥನ ಪುರಾಣದ ಅಂಶಷಟ್ಪದ ಪದ್ಯಗಳು ಬಳಕೆಯಾಗಿವೆ. ‘ಆನೆಗೊಂದಿಯಲ್ಲಿ ದೊರೆತ ತಾಮ್ರಪಟದಲ್ಲಿ (ಕಾಲ 13ನೇ ಶತಮಾನ) ವಿವಾಹ ಪುರಾಣ, ಸಮಯಶಾಸನ ಪುರಾಣ ಮತ್ತು ಅಮೃತಮಥನ ಪುರಾಣದ ಹೆಸರಿನ ಮೂರು ಕಾವ್ಯಗಳು ಇದ್ದು ಅಮೃತಮಥನ ಪುರಾಣದ 23 ಪದ್ಯಗಳು ಅಂಶಷಟ್ಪದದಲ್ಲಿ ಬಳಕೆಯಾಗಿರುವುದನ್ನು ಎಂ.ಎಂ.ಕಲಬುರ್ಗಿ ಅವರು ಗುರುತಿಸಿದ್ದಾರೆ. ಶಾಸನಪಾಠ ಹಲವೆಡೆ ದೋಷಪೂರಿತವಾಗಿದ್ದರೂ ಪರಿಷ್ಕರಿಸಬಹುದಾಗಿದೆ. ನಿದರ್ಶನಕ್ಕೆ ಶಾಸನದ ಒಂದು ಪದ್ಯವನ್ನು ಕೊಡಲಾಗಿದೆ.

ಗಿರಿರಾಜ ನಿಮ್ಮಯ್ಯ

ವರಮೇನೆ ನಿಮ್ಮವ್ವ

ಗಿರಿಸುತೆ ನಿಮ್ಮೊಡವುಟ್ಟಿದಕ್ಕಂ

ಪರಮೇಶ ಭಾವನಾ

ಗೊರವಂಗಿರಳಿಯಂದಿ

ರ್ಕರಗ ವಿದ್ಯಾಧರರ ಕುಲಮುಂತುಂಟುಂ

    ಹೀಗೆ ಸೊಲ್ಲಾಪುರದ ಶಾಸನೋಕ್ತ ವಿವಾಹ ಪುರಾಣ ಹಾಗೂ ಆನೆಗೊಂದಿ ಶಾಸನದಲ್ಲಿ ಬಳಕೆಯಾದ ಅಮೃತಮಥನ ಪುರಾಣ ಕಾವ್ಯಗಳು ಅತ್ಯಂತ ಪ್ರಾಚೀನ ಹಾಗೂ ಮೊದಲ ಶಾಸನೋಕ್ತ ಅಂಶಷಟ್ಪದಿ ಕಾವ್ಯಗಳೆಂಬ ಹಿರಿಮೆಗೆ ಪಾತ್ರವಾಗಿವೆ. ಅಂಶ ಛಂದಸ್ಸಿನ ಅತ್ಯಂತ ಪ್ರಾಚೀನ ಶಾಸನಸ್ಥ ಜಾನಪದ ಕೃತಿ ಎಂದು ವಿದ್ವಾಂಸರಿಂದ ಗುರುತಿಸಲ್ಪಟ್ಟಿದೆ.

           ಕನ್ನಡ ಶಾಸನಗಳ ಸಾಮಾನ್ಯ ಸ್ವರೂಪ, ಅವುಗಳಲ್ಲಿ ದಾಖಲೆಯಾದ ಇತಿಹಾಸ ಸಮಾಜ ಮೊದಲಾದವುಗಳ ಜೊತೆಗೆ ಅವುಗಳ ಭಾಷೆ, ಛಂದಸ್ಸು ಮೊದಲಾದವು ನಾಡು ನುಡಿಗಳ ಪರಂಪರೆಯನ್ನು ತಿಳಿಯಲು ನಮಗೆ ಅಧಿಕೃತ ಆಕರಗಳಾಗಿವೆ. ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಇವುಗಳಿಂದ ನಮ್ಮ ಭಾಷೆ ಬೆಳೆದು ಬಂದಿರುವ ರೀತಿ ಗೊತ್ತಾಗಿದೆ; ಸಾಹಿತ್ಯದ ಪ್ರಾಚೀನತೆ, ಬೆಳವಣಿಗೆ, ಸತ್ವ ಸೌಂದರ್ಯಗಳು ಮನವರಿಕೆಯಾಗಿವೆ; ಗ್ರಂಥಸ್ಥ ಸಾಹಿತ್ಯದ ಸಂಶೋಧನೆಗೆ ಪೂರಕಸಾಮಗ್ರಿ ದೊರೆತಿದೆ; ಹೊಸ ಸಂಗತಿಗಳ ತಿಳುವಳಿಕೆಯು ಹಳೆಯ ಸಮಸ್ಯೆಗಳ ಪರಿಹಾರವೂ ಸಾಧ್ಯವಾಗಿವೆ. ಶಾಸನಗಳ ಪ್ರಕಟನೆಯೂ ಅಭ್ಯಾಸವೂ ಪೂರ್ಣಗೊಂಡಿಲ್ಲ. ಶಾಸನಗಳ ಭಾಷೆಯ, ಸಾಹಿತ್ಯಗಳ ಬಹುಮುಖ ಅಧ್ಯಯನವು  ವ್ಯವಸ್ಥಿತ ಕ್ರಮಗಳಲ್ಲಿ ಇನ್ನು ನಡೆಯಬೇಕಾಗಿದೆ. ವಾಸ್ತವವಾಗಿ ಸಂಸ್ಕೃತ ಪ್ರಾಕೃತ ಶಾಸನಗಳ ವಿಷಯದಲ್ಲಿ ನಡೆದಿರುವಷ್ಟು ವ್ಯಾಪಕವಾದ ಅಭ್ಯಾಸ ಕನ್ನಡ ಶಾಸನಗಳ ವಿಷಯದಲ್ಲಿ ಆಗಿಲ್ಲ. ಶಾಸನಗಳ ಭಾಷೆ ಛಂದಸ್ಸು ಕವಿಗಳು ಶಬ್ದಗಳ ಮತ್ತು ಸಂದರ್ಭಗಳ ಅಕಾರಾದಿ, ಸಂಕಲನ ಗ್ರಂಥಗಳು, ಸಾಹಿತ್ಯ ವಿವೇಚನೆ, ವಿಶಿಷ್ಟ ಶಬ್ದಗಳ ಮತ್ತು ಸಂದರ್ಭಗಳ ಕೋಶಗಳು ಹೀಗೆ ವಿವಿಧ ಮುಖಗಳಲ್ಲಿ ಕೆಲಸಗಳು ನಡೆಯಬೇಕಾಗಿವೆ.

 

 

  ಎಲ್.‌ ಬಸವರಾಜು ಅವರ ಸಾಹಿತ್ಯ ಸಂಶೋಧನಾ ವೈಧಾನಿಕತೆ                                    ಡಾ.ಸಿ.ನಾಗಭೂಷಣ       ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ...